ವೀರ ರಾಜೇಂದ್ರ - 
	ಚೋಳ ಸಾಮ್ರಾಜ್ಯದ ಒಬ್ಬ ರಾಜ (1063-69). ಪರಾಕ್ರಮಿ ದೊರೆಯಾದ ಒಂದನೆಯ ರಾಜೇಂದ್ರನ ಮೂರನೆಯ ಮಗ. ತನ್ನ ಅಣ್ಣಂದಿರಾದ ರಾಜಾಧಿರಾಜ, ಇಮ್ಮಡಿ ರಾಜೇಂದ್ರನ ಅನಂತರ ಪಟ್ಟಕ್ಕೆ ಬಂದ. ಸಿಂಹಾಸನವನ್ನೇರುವ ಮೊದಲು ತನ್ನ ಅಣ್ಣ ರಾಜೇಂದ್ರನೊಡನೆ ಚಾಳುಕ್ಯರ ವಿರುದ್ಧ ಗಂಗವಾಡಿಯ ಕದನಗಳಲ್ಲಿ ಭಾಗವಹಿಸಿದ್ದ. ಕೂಡಲ ಸಂಗಮದ (ಕೂಡಲಿ, ಶಿವಮೊಗ್ಗ ಜಿಲ್ಲೆ) ಕದನದಲ್ಲಿ ಚಾಳುಕ್ಯ ಸೈನ್ಯವನ್ನು ಸೋಲಿಸಲಾಯಿತು(1061). ಮುಂದುವರಿದ ಯುದ್ಧದಲ್ಲಿ ಕೊಪ್ಪಮ್ ಬಳಿ ನಡೆದ ಕದನದಲ್ಲಿ (1062-63) ಮತ್ತೆ ಚೋಳರ ಕೈಮೇಲಾದರೂ ವೀರರಾಜೇಂದ್ರನ ಹಿರಿಯಣ್ಣ ರಾಜ ಮಹೇಂದ್ರ ಮತ್ತು ತಂದೆ ರಾಜೇಂದ್ರ ಸ್ವಲ್ಪ ಕಾಲಾನಂತರ ಮರಣ ಹೊಂದಿದಾಗ ಈತ ಸಿಂಹಾಸನವನ್ನೇರಿದ. ತನ್ನ ಸಿಂಹಾಸನಾಧಿಕಾ ರವನ್ನು ಭದ್ರಗೊಳಿಸಿದ. ಆ ವೇಳೆಗೆ ತನ್ನ ಬಲವನ್ನು ಸುಸಜ್ಜಿತಗೊಳಿಸಿ ಕೊಂಡಿದ್ದು ಸೋಮೇಶ್ವರನ ವಿರುದ್ಧ ದಾಳಿ ಮಾಡಿ ವೆಂಗಿಯಲ್ಲಿ ಸ್ವಲ್ಪ ಮಟ್ಟಿಗೆ ಜಯಗಳಿಸಿದ; ತುಂಗಭದ್ರೆಯ ದಡದಲ್ಲಿ ನಡೆದ ಕದನದಲ್ಲಿ (1066) ನಿರ್ಣಾಯಕವಾಗಿ ಚಾಳುಕ್ಯ ಸೈನ್ಯವನ್ನು ಸೋಲಿಸಿದ. ಮತ್ತೆ ಸೋಮೇಶ್ವರ ಕೂಡಲ ಸಂಗಮದಲ್ಲಿ ಯುದ್ಧಕ್ಕೆ ಆಹ್ವಾನ ನೀಡಿದಾಗ ವೀರರಾಜೇಂದ್ರ ಅಲ್ಲಿಗೆ ಸೈನ್ಯ ಸಮೇತ ಹೋದನಾದರೂ ಸೋಮೇಶ್ವರ ಯುದ್ಧಕ್ಕೆ ಬರಲಿಲ್ಲ. ಚೋಳರು ಚಾಳುಕ್ಯ ಸೈನ್ಯವನ್ನು ಪೂರ್ಣವಾಗಿ ಸೋಲಿಸಿ ತುಂಗಭದ್ರೆಯ ದಡದಲ್ಲಿ ಜಯಸ್ತಂಭ ಸ್ಥಾಪಿಸಿದರು. ಮತ್ತೆ ವೆಂಗಿಯಲ್ಲಿ ಎರಡು ಸೈನ್ಯಗಳೂ ಸಂಧಿಸಿದಾಗ ವೀರರಾಜೇಂದ್ರನಿಗೆ ಜಯಲಕ್ಷ್ಮಿ ಒಲಿದಳು. ಇವನು ಕಳಿಂಗಕ್ಕೆ ಮುನ್ನಡೆದು ಗೆಲುವು ಸಾಧಿಸಿದ. ಈ ಮಧ್ಯೆ ಮಾರಣಾಂತಿಕ ರೋಗ ಸಹಿಸಲಾರದ ಸೋಮೇಶ್ವರ ಪರಮಯೋಗವನ್ನು ಆಚರಿಸಿ ತುಂಗಭದ್ರೆಯಲ್ಲಿ ಮುಳುಗಿ ಸಾವನ್ನಪ್ಪಿದ. (1068 ಮಾರ್ಚ್)

	ವೀರರಾಜೇಂದ್ರ ದಕ್ಷಿಣದಲ್ಲಿ ಶ್ರೀಲಂಕಾದ ಮೇಲೆ ಆಕ್ರಮಣ ಮಾಡಿ 1067ರಲ್ಲಿ ವಾತಗಿರಿ (ಕೆಗಲ್ಲಾ ಜಿಲ್ಲೆಯ ವಕಿರಿಗಲಾ) ಎಂಬಲ್ಲಿ ಅಲ್ಲಿನ ರಾಜ ವಿಜಯಬಾಹುವನ್ನು ಸೋಲಿಸಿ, ಅವನ ರಾಣಿಯನ್ನು ಸೆರೆಹಿಡಿದ. ಮಲೇಷ್ಯದ ಕಡಾರಂ ಎಂಬಲ್ಲಿಗೆ ನೌಕಾದಾಳಿ ಮಾಡಿ ತನ್ನ ಆಶ್ರಿತನಾದ ಅಲ್ಲಿಯ ರಾಜಕುಮಾರನಿಗೆ ಸಿಂಹಾಸನ ಕೊಡಿಸಿದ (1068). ಚೋಳ ಸಿಂಹದಂತಿದ್ದ ಈತ 1070ರಲ್ಲಿ ನಿಧನನಾದ.							
			(ಕೆ.ಟಿ.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ